ಫೈನಾನ್ಷಿಯಲ್ ಎಕ್ಸ್‍ಪ್ರೆಸ್
ಮುಂಬಯಿ, ದೆಹಲಿ ಮತ್ತು ಮದರಾಸುಗಳಿಂದ ಪ್ರಕಟವಾಗುತ್ತಿರುವ, ಒಂದು ಆರ್ಥಿಕ ಇಂಗ್ಲಿಷ್ ದಿನಪತ್ರಿಕೆ. ಭಾರತದಲ್ಲಿ ಆರ್ಥಿಕ ಸಮಾಚಾರಗಳಿಗೆ ಮೀಸಲಾದ ಪತ್ರಿಕೋದ್ಯಮದ ಪ್ರಾರಂಭ ಈಚಿನದೆಂದು ಹೇಳಬಹುದು. ಅಮೆರಿಕದ ವಾಲ್‍ಸ್ಟ್ರೀಟ್ ಜರ್ನಲ್ ಮತ್ತು ಬ್ರಿಟನ್ನಿನ ಫೈನಾನ್ಷಿಯಲ್ ಟೈಮ್ಸ್ ಮಾದರಿಯ ಈ ಪತ್ರಿಕೆ 1961ರಲ್ಲಿ ಪ್ರಥಮವಾಗಿ ಮುಂಬಯಿಯಲ್ಲಿ ಪ್ರಾರಂಭವಾಯಿತು. ಸಂಪಾದಕ ಜಿ. ಎಂ. ಲಾಡ್, ಆಗಿನ ಪತ್ರಿಕೆಯ ಬೆಲೆ 30 ಪೈಸೆ ಇದ್ದು ಪ್ರಸಾರ 11,737 (1962) ಇತ್ತು. ಎಕ್ಸ್‍ಪ್ರೆಸ್ ಪತ್ರಿಕಾ ಸರಣಿಗೆ ಸೇರಿದ ಈ ಪತ್ರಿಕೆಯ ಸ್ವಾಮ್ಯ ಕೈಗಾರಿಕೋದ್ಯಮಿ ರಾಮನಾಥ ಗೋಯೆಂಕಾ ಅವರಿಗೆ ಸೇರಿದ್ದು. ಈ ಪತ್ರಿಕೆಯ ದೆಹಲಿ ಆವೃತ್ತಿ 1974ರಲ್ಲಿ ಪ್ರಾರಂಭವಾಯಿತು. ಅದರ ಪ್ರಸಾರ 10,013(1979) ಇದ್ದಿತು. ಮುಂಬಯಿಯಿಂದ ಪ್ರಕಟವಾಗುತ್ತಿರುವ ಈ ಪತ್ರಿಕೆಯ ಈಗಿನ ಸಂಪಾದಕರು ಎಸ್ ಜಗನ್ನಾಥನ್ ಹಾಗೂ ಪ್ರಧಾನ ಸಂಪಾದಕರು ಗೌತಮ್ ಚಕ್ಕೆರಮನೆ. ಮುಂಬಯಿ ಆವೃತ್ತಿಯ ಪತ್ರಿಕಾ ಪ್ರಸಾರ 17,111 (1979) ಇದ್ದಿತು. 1980ರಿಂದ ಈ ಪತ್ರಿಕೆಯ ಇತರ ಆವೃತ್ತಿಗಳು ಕೊಲ್ಕತ್ತಾ, ಚಂಡೀಗಢ, ಚೆನ್ನೈ, ಬೆಂಗಳೂರು, ಕೊಚ್ಚಿನ್, ಅಹಮದಾಬಾದ್, ಹೈದರಾಬಾದ್‍ಗಳಿಂದಲೂ ಪ್ರಕಟವಾಗುತ್ತವೆ. ಚೆನ್ನೈ ಆವೃತ್ತಿಯ ಸ್ಥಾನಿಕ ಸಂಪಾದಕ ಎಂ.ಕೆ.ದಾಸ್. ಪತ್ರಿಕೆಯ ಈಗಿನ ಬೆಲೆ 70 ಪೈಸೆ.

	ಪ್ರಮುಖ ಸುದ್ಧಿಸಂಸ್ಥೆಗಳ ಸೇವೆಯನ್ನು ಪಡೆದಿರುವ ಈ ಪತ್ರಿಕೆ ಆರ್ಥಿಕ ಸಮಾಚಾರಗಳನ್ನು ಪ್ರಕಟಿಸುವುದಲ್ಲದೆ ಸರ್ಕಾರದ ಮತ್ತು ಖಾಸಗಿಯ ಉದ್ಯಮಗಳ ನಿರ್ಭೀತ ವಿಶ್ಲೇಷಣೆಯನ್ನು ಪ್ರಕಟಿಸುವುದು. ಈ ಪತ್ರಿಕೆಯಲ್ಲಿ ವಿ.ಕೆ. ನರಸಿಂಹನ್ ಮತ್ತು ಸಿ.ಪಿ. ರಾಫ್‍ವನ್ ಮುಂತಾದವರು ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಹಮದಾಬಾದ್‍ನಿಂದ ಫೈನಾನ್ಷಿಯಲ್ ಎಕ್ಸ್‍ಪ್ರೆಸ್ ಗುಜರಾತಿ ಭಾಷೆಯಲ್ಲೂ ಪ್ರಕಟವಾಗುತ್ತಿದೆ
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ